ಬಸವರಾಜ ಗುಡಿಗೇರಿ, ಎನ್
(1940- ). ಹಾವೇರಿ ಜಿಲ್ಲೆ, ಕುಂದಗೋಳ ತಾಲೂಕಿನ ಗುಡಗೇರಿಯು ಶಿಶುನಾಳ ಶರೀಫರಿಗೆ ಮೂಗುತಿ ಕೊಟ್ಟಂಥ ದ್ಯಾಮವ್ವನ ಊರು. ಈ ಊರಿನ ಮಧ್ಯಮ ವರ್ಗದ ರೈತ ಕುಟುಂಬ ಬಸವರಾಜರದು. ಇವರು ಹುಟ್ಟಿದ್ದು 1940ರಲ್ಲಿ. ತಂದೆ ಚೆನ್ನಬಸಪ್ಪ, ತಾಯಿ ಗೌರಮ್ಮ. ಆಟ ನಾಟಕಗಳ ಗೀಳಿನಿಂದ ಮೂರನೆಯ ಇಯತ್ತೆಗಿಂತ ಹೆಚ್ಚು ಓದಲಾಗಲಿಲ್ಲ. ಮಗನು ಓದಿ ಸರಕಾರಿ ಕಛೇರಿಯಲ್ಲಿ ಅಧಿಕಾರಿಯಾಗಬೇಕೆಂದು ತಾಯಿ ತಂದೆ ಬಯಸಿದ್ದರು. ಆದರೆ ಬಸವರಾಜರಿಗೆ ಫೈಲು ನೋಡುವುದಕ್ಕಿಂತ ಹೆಚ್ಚು ಪೈಲ್ವಾನ್ ಆಗುವುದೇ ಸುಲಭವೆನಿಸಿತು. ಪೈಲ್ವಾನ್ ಆಗಿ ಕುಸ್ತಿಕಣದಲ್ಲಿಯೂ ಬಹಳ ದಿನ ಆಡಲಾಗಲಿಲ್ಲ. ಗೆಳೆಯರೆಲ್ಲ ಕೂಡಿ ಆಡಿದ ನಾಟಕದಿಂದ  ಬಣ್ಣದ ಬದುಕಿನ ನಂಟು ಬೆಳೆಯಿತು. ತಾವು ಬೆಳೆದು ಬಂದ ದಾರಿಯ ಬಗ್ಗೆ ಬಸವರಾಜರು ಹೇಳುವುದು ಹೀಗೆ: ಹನ್ನೊಂದನೆಯ ವಯಸ್ಸಿನವರೆಗೆ ತಾಯಿಯ ಹಾಲು ಕುಡಿದಿದ್ದೇನೆ. ಹದಿನೇಳನೆಯ ವರುಷಕ್ಕೆ ಕುಸ್ತಿ ಪೈಲ್ವಾನ್ ಆದೆ. ಇಪ್ಪತ್ತಕ್ಕೆ ನಟ, ಇಪ್ಪತ್ಮೂರಕ್ಕೆ ನಾಟಕ ಕಂಪನಿಯ ಒಡೆಯ, ಇಪ್ಪತ್ತಾರಕ್ಕೆ ನಾಟಕಕಾರನಾದೆ. 

ಸುಮಿತ್ರಾ ಕುಂದಾಪುರರ ಕಂಪನಿಯಲ್ಲಿ ಪುತ್ಥಳಿ ನಾಟಕದೊಳಗಿನ ವಿಜಯನ ಪಾತ್ರದಿಂದ ಬಸವರಾಜರು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದದ್ದೇ ಅವರು ರಂಗಭೂಮಿಯನ್ನು ಒಲಿದು ನಿಲ್ಲಲು ಪ್ರೇರಣೆ ಒದಗಿತು. ಮುಂದೇ ಎರಡೇ ವರ್ಷಗಳ ಅವಧಿಯಲ್ಲಿ ಸ್ವಂತ ಕಂಪನಿ ಕಟ್ಟಲು ತಯಾರಿ ನಡೆಸಿದರು. ಊರ ಹಿರಿಯರ ಸಹಕಾರ ಹಾಗೂ ಗೆಳೆಯರ ಬೆಂಬಲದಿಂದ ನವೆಂಬರ್ 17, 1963, ರಂದು (ದೀಪಾವಳಿ ಪಾಡ್ಯ) `ಶ್ರೀ ಸಂಗಮೇಶ್ವರ ನಾಟ್ಯ ಸಂಘವನ್ನು ಹುಟ್ಟು ಹಾಕಿದರು. ಮಹಾದೇವ ಬಣಕಾರರ `ಹದ್ದು ಮೀರಿದ ಹೆಣ್ಣು ನಾಟಕದಿಂದ ಪ್ರಾರಂಭವಾದ ಕಂಪನಿ ಧುತ್ತರಗಿಯವರ 'ತಾಯಿ ಕರಳು, `ಮಲಮಗಳು, ಹೂಗಾರರ `ಸುವರ್ಣಾ ನಾಟಕಗಳನ್ನಾಡಿ ಯಶಸಿನ ಹಾದಿಯಲ್ಲಿ ಹೆಜ್ಜೆ ಹಾಕಿತು. 

ನಟನೆ ಒಲಿದು, ನಾಟಕ ಕಂಪನಿಯ ಆಡಳಿತ ಒಲಿದ ಮೇಲೆ ನಾಟಕಗಳ ರಚನೆಗೂ ಕೈ ಹಾಕಿದರು. ತಮ್ಮ ಊರಲ್ಲಿ ಮತ್ತು ಸುತ್ತ ಮುತ್ತಲಿನ ಊರುಗಳಲ್ಲಿ ನಡೆದಿರುವ ಘಟನೆಗಳಿಗೆ ನಾಟಕದ ರೂಪ ಕೊಟ್ಟರು. `ಸೂಳೆಯ ಮಗ, `ರೈತನ ಮಕ್ಕಳು, `ದುಡ್ಡಿನ ದರ್ಪ, `ಶೀಲ ಸೌಭಾಗ್ಯ, `ಸುಟ್ಟಿತು ಶೀಲ, `ಸುಶಿಕ್ಷತರು, `ವಿಧಿಯ ಕೈವಾಡ, `ಮದುವೆಯಾಗದ ವಿಧವೆ, `ಹೆಣ್ಣು ಉರಿಗಣ್ಣು, `ಬಣ್ಣದ ಹೆಣ್ಣು, `ಸತ್ಯ ಸತ್ತಿತು, `ಛಲ ತೀರಿತು, `ತಪ್ಪು ನಿನ್ನದಲ್ಲ, `ಹೆತ್ತ ತಾಯಿ, `ಗಂಡ ಬಿಟ್ಟ ಗರತಿ' - ಇವು ಪ್ರಮುಖ ನಾಟಕಗಳು, 'ಸೂಳೆಯ ಮಗ ಮತ್ತು 'ರೈತನ ಮಕ್ಕಳು ಅತಿ ಹೆಚ್ಚು ಪ್ರದರ್ಶನ ಕಂಡು ಕಂಪನಿಗೆ ಕೀರ್ತಿ ಮತ್ತು ಸಂಪತ್ತನ್ನು ತಂದು ಕೊಟ್ಟವು. 

1974ರಲ್ಲಿ, ಕೆ.ಎನ್.ಸಾಳುಂಕೆಯವರ ವರ ನೋಡಿ ಹೆಣ್ಣ ಕೊಡು ನಾಟಕವನ್ನು ಪ್ರದರ್ಶನಕ್ಕೆತ್ತಿಕೊಂಡು ಬಸವರಾಜರು ಅಪಾರ ಯಶಸ್ಸನ್ನು ಗಳಿಸಿದರು. ಹುಬ್ಬಳ್ಳಿಯಲ್ಲಿ ಈ ನಾಟಕವು ಸತತ ಮೂರು ವರುಷ ನಡೆದು ದಾಖಲೆ ನಿರ್ಮಿಸಿತು. ಈ ನಾಟಕದ ಗೆಲುವಿನಂದಾಗಿಯೇ ಬಸವರಾಜರು 1975ರಲ್ಲಿ ಎರಡನೆಯ ಶಾಖೆಯನ್ನು ಆರಂಭಿಸಿದರು. 1977ರಲ್ಲಿ ಮೂರನೆಯ ಶಾಖೆಯನ್ನು ಆರಂಭಿಸಿದರು. ಮೂರು ಕಂಪನಿಯಲ್ಲಿದ್ದ ಒಟ್ಟು ಕಲಾವಿದರ ಸಂಖ್ಯೆ 160ಕ್ಕಿಂತಲೂ ಹೆಚ್ಚು ಆಗ ಪ್ರತಿದಿನದ ಖರ್ಚು ಅಂದಾಜು 10,000ರೂ.ಗಳು. 1980ರವರೆಗೆ ಕಂಪನಿಯನ್ನು ಅದ್ದೂರಿಯಾಗಿ ನಡೆಸಿದರು. 

1977ರಲ್ಲಿ, ಸಿಂಧೂರ ಲಕ್ಷ್ಮಣ ಚಲನಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡರು. ಆಮೇಲೆ ಅತಿಥಿ ನಟಿಯಾಗಿದ್ದ ಮಿನುಗು ತಾರೆ ಕಲ್ಪನಾಳ ಸಾವು, ರೈತನ ಮಕ್ಕಳು ನಾಟಕವನ್ನು ಸಿನೇಮಾ ಮಾಡುವಾಗ ಮುಖ್ಯ ಕಲಾವಿದರು ರಸ್ತೆ ಅಪಘಾತದಲ್ಲಿ ತೀರಿಕೊಂಡದ್ದು, ಈ ಘಟನೆಗಳಿಂದ ಎನ್. ಬಸವರಾಜರ ನಾಟ್ಯ ಸಂಘಕ್ಕೆ ಮಂಕು ಕವಿದಂತಾಯಿತು. ಕ್ರಮೇಣ ಶಾಖೆಗಳು ಒಂದೊಂದಾಗಿ ಮುಚ್ಚಿದವು. ಪರಿಸ್ಥಿತಿ ಎಷ್ಟೇ ಎದುರಾದರೂ ಛಲ ಬಿಡದ ತ್ರಿವಿಕ್ರಮನಂತೆ ಮೂಲ ಕಂಪನಿಯನ್ನು ಉಳಿಸಿಕೊಂಡು ಹೊಸ ಹೊಸ ನಾಟಕಗಳನ್ನಾಡುತ್ತ ಮುನ್ನಡೆದರು. 

`ಸಿಂಧೂರ ಲಕ್ಷ್ಮಣ', `ರೈತನ ಮಕ್ಕಳು, `ಅಮೃತ ಸಿಂಧು, `ಧರಣಿ ಮಂಡಲ ಮಧ್ಯದೊಳಗೆ, `ಸಾಂಗ್ಯಾ ಬಾಳ್ಯಾ ಮುಂತಾದ ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. 

ನಾಟಕದಿಂದ ಬಂದ ಆದಾಯದಲ್ಲಿ ಕೆಲ ಭಾಗವನ್ನು ಸಮಾಜಕ್ಕೆ, ಕವಿ ಕಲಾವಿದರಿಗೆ ಕೊಟ್ಟಿದ್ದಾರೆ. ಗುಡಿ ಗುಂಡಾರಗಳ ನಿರ್ಮಾಣಕ್ಕಾಗಿ, ಉಚಿತ ಸಾಮಾಜಿಕ ವಿವಾಹಗಳಿಗಾಗಿ, ದೀನ ದಲಿತರ ನೆರವಿಗೆ ಕೆಲವು ಬೆನಿಫಿಟ್ ಶೋಗಳನ್ನು ಕೊಟ್ಟಿದ್ದಾರೆ. 

ರಾಜ್ಯ ನಾಟಕ ಅಕಾಡೆಮಿಗೆ ಎರಡು ಅವಧಿಗೆ ಸದಸ್ಯರಾಗಿದ್ದ ಶ್ರೀಯುತರು ಉತ್ತರ ಕರ್ನಾಟಕ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ, ವೃತ್ತಿ ರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ. ರಂಗಕಲಾವಿದರ ಸಂಘದ ಗೌರವ ಅಧ್ಯಕ್ಷ ಇತ್ಯಾದಿ ವೃತ್ತಿಗೆ ಸಂಬಂಧಿಸಿದಂತೆ ಹುದ್ದೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ದಾವಣಗೆರೆಯಲ್ಲಿ ಜರುಗಿದ ಪ್ರಥಮ ವೃತ್ತಿ ರಂಗಭೂಮಿ ಕಲಾವಿದರ ಮಹಾಸಮ್ಮೇಳನದ ಅಧ್ಯಕ್ಷರಾಗಿದ್ದರು.

ಎನ್. ಬಸವರಾಜ ನಟರಾಗಿ, ನಾಟಕ ಕಂಪನಿಯ ಒಡೆಯರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ರಂಗಭೂಮಿಗೆ ಸೇವೆ ಸಲ್ಲಿಸಿದ್ದಾರೆ. ಇವರ ಅನನ್ಯ ಸೇವೆಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳೂ ಬಂದಿವೆ. ಅವುಗಳಲ್ಲಿ 2003-04 ನೇ ಸಾಲಿನ ಪ್ರತಿಷ್ಠಿತ ಗುಬ್ಬಿ ವೀರಣ್ಣ ಪ್ರಶಸ್ತಿಯೂ ಸೇರಿದೆ. 
 (ರಾಮಕೃಷ್ಣ ಮರಾಠೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ